ಚೀನ ಸೋಂಪು

	ಮ್ಯಾಗ್ನೋಲಿಯೇಸೀ ಕುಟುಂಬಕ್ಕೆ ಸೇರಿ ಪ್ರಸಿದ್ಧ ಸಂಬಾರ ಸಸ್ಯ(ಸ್ಟಾರ್ ಆನಿಸ್, ಚೈನೀಸ್ ಆನಿಸ್). ಚಕ್ರಮೊಗ್ಗು ಪರ್ಯಾಯನಾಮ. ಇಲಿಸಿಯಮ್ ವೇರಮ್ ಇದರ ಶಾಸ್ತ್ರೀಯ ಹೆಸರು. ಚೀನ ಇಂಡೊ ಚೀನಗಳಲ್ಲಿ ಬೆಳೆಯುತ್ತದೆ. ಇದು 8-15m ಎತ್ತರ ಬೆಳೆಯುವ ಮತ್ತು ಸದಾ ಹಸಿರಾಗಿರುವ ಮರ. ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಅಂಡಾಕಾರ ಇಲ್ಲವೆ ಭರ್ಜಿಯಾಕಾರದ ಇವುಗಳ ಉದ್ದ 10-15ಛಿm ಅಗಲ 2.5-5ಛಿm. ಹೂಗಳು ಒಂಟೊಂಟಿಯಾಗಿ ಅರಳುತ್ತವೆ. ಅವುಗಳ ಬಣ್ಣ ಕೆಂಪಿನಿಂದ ಬಿಳಿಯವರೆಗೆ ವ್ಯತ್ಯಾಸವಾಗುತ್ತದೆ. ಫಲ ನಕ್ಷತ್ರದಾಕಾರದಲ್ಲಿ ಜೋಡಣೆಗೊಂಡಿರುವ 8 ಫಾಲಿಕಲ್ ಭಾಗಗಳನ್ನೊಳಗೊಂಡಿದೆ. ಈ ಕಾರಣದಿಂದಲೇ ಗಿಡಕ್ಕೆ ಚಕ್ರಮೊಗ್ಗು ಎಂಬ ಹೆಸರು ಬಂದಿರಬೇಕು. ಪ್ರತಿಯೊಂದು ಫಾಲಿಕಲಿನಲ್ಲೂ ಬೀಜಗಳಿವೆ. ಬೀಜಗಳು ಬಲುಗಟ್ಟಿ, ಹೊಳೆಯುತ್ತಿರುತ್ತವೆ. ಅವುಗಳ ಬಣ್ಣ ಕಂದು. ಚೀನಸೋಂಪನ್ನು ಬೀಜದಿಂದ ವೃದ್ಧಿಸುತ್ತಾರೆ. ಅಕ್ಟೋಬರ್ ನವಂಬರ್ ತಿಂಗಳಲ್ಲಿ ಬಿತ್ತನೆ ಮಾಡುವುದು ವಾಡಿಕೆ. ಮೊಳಕೆಯೊಡೆದು ಬೆಳೆಯುವ ಸಸಿ ನಾಲ್ಕು ಎಲೆಗಳನ್ನು ಪಡೆದಮೇಲೆ ನರ್ಸರಿಗೆ ವರ್ಗಾಯಿಸಲ್ಪಡುತ್ತದೆ. ಮತ್ತೆ 3 ವರ್ಷಗಳ ಅನಂತರ ಶಾಶ್ವತ ಸ್ಥಳಕ್ಕೆ ನಾಟಿಮಾಡಲ್ಪಡುತ್ತದೆ. 10 ವರ್ಷ ವಯಸ್ಸಾದ ಮೇಲೆ ಮರಗಳು ಫಲ ಬಿಡಲು ಪ್ರಾರಂಭಿಸುತ್ತವೆ. ಮರದ ಆಯುಸ್ಸು ಸುಮಾರು 80-100 ವರ್ಷಗಳು. ಫಲಕ್ಕೆ ಹಿತವಾದ, ಸುವಾಸನಾಯುಕ್ತ ಹಾಗೂ ಸಿಹಿರುಚಿ ಮತ್ತು ಮಧುರವಾದ ವಾಸನೆ ಇವೆ. ಖಾರದ ತಿಂಡಿ, ಮಿಠಾಯಿ, ಚೂಯಿಂಗ್‍ಗಮ್, ಔಷದಿ ತಯಾರಿಕೆಗಳು, ಹೊಗೆಸೊಪ್ಪು ಮತ್ತು ಮಾದಕ ದ್ರವ್ಯಗಳಿಗೆ ವಾಸನೆ ಕಟ್ಟಲು ಇದನ್ನು ಬಳಸುತ್ತಾರೆ. ಸುಗಂಧ ದ್ರವ್ಯಗಳಲ್ಲೂ ಇದನ್ನು ಉಪಯೋಗಿಸುವುದುಂಟು. ಇದನ್ನು ಆವಿ ಆಸನೀಕರಣಗೊಳಿಸಿ ಪಡೆಯಲಾಗುವ ತೈಲವನ್ನೂ ಇದೇ ರೀತಿ ಸುವಾಸನಾಕಾರಕವಾಗಿ ಬಳಸುವುದಿದೆ. ಕಾಯಿಗೆ ಔಷದೀಯ ಗುಣಗಳೂ ಉಂಟು. ಇದು ಒಳ್ಳೆಯ ಪಚನಕಾರಿ. ಕೆಮ್ಮಿಗೆ ಬಳಸಲಾಗುವ ಕಷಾಯಗಳಲ್ಲೂ ಇದರ ಉಪಯೋಗ ಇದೆ.
(ಎಸ್‍ಐ.ಎಜ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ